Loading Events

« All Events

ಜೂನ್ 15ರಂದು ಅಧಿಕ ಜ್ಯೇಷ್ಠ ಅಮಾವಾಸ್ಯೆ ಅಂಗವಾಗಿ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆ, ಶತಚಂಡಿ ಯಾಗ ಹಾಗೂ ಭವ್ಯ ಪ್ರಕಾರೋತ್ಸವ

June 15 @ 8:00 am - 5:00 pm

ಪತ್ರಿಕಾ ಪ್ರಕಟಣೆ

ಜೂನ್ 15ರಂದು ಅಧಿಕ ಜ್ಯೇಷ್ಠ ಅಮಾವಾಸ್ಯೆ ಅಂಗವಾಗಿ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆ, ಶತಚಂಡಿ ಯಾಗ ಹಾಗೂ ಭವ್ಯ ಪ್ರಕಾರೋತ್ಸವ

ಕೆ.ಜಿ. ದೇವಪಟ್ಟಣ, ಕುಣಿಗಲ್: ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ, ಶೃಂಗೇರಿ ಪರಿಪಾಲಿತ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಶ್ರೀ ಕ್ಷೇತ್ರದಲ್ಲಿ ಜೂನ್ 15ರಂದು ನಡೆಯಲಿರುವ ಅತ್ಯಂತ ಪವಿತ್ರ ಹಾಗೂ ವಿಶೇಷವಾದ ಅಧಿಕ ಜ್ಯೇಷ್ಠ ಅಮಾವಾಸ್ಯೆ ಅಂಗವಾಗಿ ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ವೈದಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಳಸ ಬರವಣಿಗೆ ಮತ್ತು ಕಳಸ ಶಾಸ್ತ್ರದ ಮೂಲ ಸನ್ನಿಧಾನವೆಂದು ಪ್ರಸಿದ್ಧಿಯಾಗಿರುವ ಈ ಪುಣ್ಯಕ್ಷೇತ್ರದಲ್ಲಿ ವಿದ್ಯೆ ಮತ್ತು ಶಕ್ತಿಯ ಅಧಿದೇವತೆಯಾದ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆಗಳು, ಹೋಮ-ಹವನಗಳು ಹಾಗೂ ಶತಚಂಡಿ ಯಾಗ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.

ಜೂನ್ 14ರ ಮಧ್ಯರಾತ್ರಿಯಿಂದಲೇ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿದ್ದು, ರಾತ್ರಿ 1.30 ಗಂಟೆಗೆ ಶ್ರೀ ವಿದ್ಯಾ ಚೌಡೇಶ್ವರಿ ತಾಯಿಗೆ ವಿಶೇಷ ಪೂಜೆ ನೆರವೇರಿಸಲಾಗುವುದು.

ಜೂನ್ 15ರಂದು ಬೆಳಗಿನ ಜಾವ 5 ಗಂಟೆಗೆ ಆಗಮಿಸುವ ಭಕ್ತಾದಿಗಳಿಗೆ ಹರಿಶಿನ ಸ್ನಾನ ಮಾಡಿಸಲಾಗುವುದು. ನಂತರ ಸಪ್ತ ನದಿಗಳ ಪವಿತ್ರ ಜಲದಿಂದ ಅಮ್ಮನವರಿಗೆ ಮಹಾಭಿಷೇಕ ನೆರವೇರಿಸಿ, ಆ ಪವಿತ್ರ ತೀರ್ಥವನ್ನು ಭಕ್ತರ ಮೇಲೆ ಪ್ರೋಕ್ಷಣೆ ಮಾಡಲಾಗುವುದು.

ಮುಂಜಾನೆಯಿಂದಲೇ ದೇವಸ್ಥಾನದ ಆವರಣದಲ್ಲಿ ಲೋಕಕಲ್ಯಾಣಾರ್ಥವಾಗಿ ವಿವಿಧ ಹೋಮ-ಹವನಗಳು ಹಾಗೂ ಅತ್ಯಂತ ಶ್ರದ್ಧಾಭಕ್ತಿಯಿಂದ ಶತಚಂಡಿ ಯಾಗ ಜರುಗಲಿದೆ. ಈ ಯಾಗದಲ್ಲಿ ಭಾಗವಹಿಸುವ ಭಕ್ತರು ದೇವಿಯ ವಿಶೇಷ ಅನುಗ್ರಹಕ್ಕೆ ಪಾತ್ರರಾಗಲಿದ್ದಾರೆ.

ಅದೇ ರೀತಿ ಕಲಿಯುಗದ ಕಾಮಧೇನು ಎಂದೇ ಭಕ್ತರಿಂದ ಆರಾಧಿಸಲ್ಪಡುವ ಹಂಗರಹಳ್ಳಿ ಬಸವಣ್ಣನವರ ನೇತೃತ್ವದಲ್ಲಿ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರು, ಚಿಕ್ಕ ಚೌಡಮ್ಮ ಹಾಗೂ ಶ್ರೀ ಶನೇಶ್ವರ ಸ್ವಾಮಿಯವರ ಭವ್ಯ ಪ್ರಕಾರೋತ್ಸವವು ವೈಭವೋಪೇತವಾಗಿ ನಡೆಯಲಿದೆ.

ಮಕ್ಕಳ ವಿದ್ಯಾಭ್ಯಾಸ, ಜ್ಞಾನವೃದ್ಧಿ ಹಾಗೂ ಉಜ್ವಲ ಭವಿಷ್ಯಕ್ಕಾಗಿ ವಿಶೇಷ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿದೆ. ಪೋಷಕರು ತಮ್ಮ ಮಕ್ಕಳೊಂದಿಗೆ ಆಗಮಿಸಿ ಅಕ್ಷರಾಭ್ಯಾಸ ಮಾಡಿಸಬಹುದಾಗಿದೆ.

ಅಧಿಕ ಜ್ಯೇಷ್ಠ ಅಮಾವಾಸ್ಯೆಯ ಈ ಅಪರೂಪದ ಪುಣ್ಯಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ವಿಶೇಷ ಪೂಜೆ, ಯಾಗ-ಯಜ್ಞಗಳಲ್ಲಿ ಭಾಗವಹಿಸಿ ಶ್ರೀ ವಿದ್ಯಾ ಚೌಡೇಶ್ವರಿ ತಾಯಿಯ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸೇವಾ ಸಮಿತಿ ಮನವಿ ಮಾಡಿದೆ.

ಸ್ಥಳ:

ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಶ್ರೀ ಕ್ಷೇತ್ರ
ಕೆ.ಜಿ. ದೇವಪಟ್ಟಣ, ಕುಣಿಗಲ್ ತಾಲ್ಲೂಕು, ತುಮಕೂರು ಜಿಲ್ಲೆ

Details

  • Date: June 15
  • Time:
    8:00 am - 5:00 pm